ಕೆರೊಟಿನಾಯ್ಡುಗಳು

ಕ್ಯಾರಟ್‍ನಲ್ಲಿ ಪ್ರಥಮವಾಗಿ ಕಂಡದ್ದರಿಂದ ಕೆರೊಟೀನ್ ಎಂಬ ಹೆಸರು ಪಡೆದ ಮೂರು ವರ್ಣದ್ರವ್ಯಗಳಿಗೆ (α-,(-ಮತ್ತು γ ಕೆರೊಟೀನ್) ನಿಕಟ ರಾಸಾಯನಿಕ ಸಂಬಂಧವಿರುವ ವರ್ಣದ್ರವ್ಯಗಳ ವರ್ಗ.  ಇವು ಮೇದಸ್ಸಿನಲ್ಲಿ ದ್ರಾವ್ಯ.  ಕೆರೊಟಿನಾಯ್ಡುಗಳು ಸಸ್ಯಗಳಲ್ಲಿಯೂ ಪ್ರಾಣಿಗಳಲ್ಲಿಯೂ ವ್ಯಾಪಕವಾಗಿ ಹರಡಿವೆ.  ಇವು ಅಸ್ಥಿರ ವಸ್ತುಗಳು.  ಇವನ್ನು ಸುಲಭವಾಗಿ ಉತ್ಕರ್ಷಣೆಗೊಳಿಸಬಹುದು.  ತಿಳಿ ಅರಿಸಿನ, ಅರಿಸಿನ, ಕಿತ್ತಳೆ ಅರಿಸಿನ, ಕೆಂಪು ಮತ್ತು ಊದಾ ಬಣ್ಣಗಳಲ್ಲಿ ಇವು ದೊರೆಯುತ್ತವೆ.

ಪ್ರಕೃತಿಸಹಜವಾಗಿ ದೊರೆಯುವ ವರ್ಣಸಮುದಾಯದಲ್ಲಿ ಕೆರೊಟಿನಾಯ್ಡುಗಳು ವ್ಯಾಪಕವಾಗಿ ಹರಡಿವೆ.  ಜೀವರಸಾಯನ ಶಾಸ್ತ್ರದ ಆಧುನಿಕ ವಿಧಾನಗಳಾದ ಕ್ರೊಮಾಟಾಗ್ರಫಿ, ಸ್ಪೆಕ್ಟ್ರೊಫೋಟೋಮಿಟ್ರಿ ಮತ್ತು ಟ್ರೇಸರ್ ತಂತ್ರಗಳ ಉಪಯೋಗದಿಂದ ಕೆರೊಟಿನಾಯ್ಡುಗಳ ಅಧ್ಯಯನದಲ್ಲಿ ಸಾಕಷ್ಟು ಪ್ರಗತಿಯನ್ನು ಗಳಿಸಲಾಗಿದೆ.  ಕೆರೊಟಿನಾಯ್ಡುಗಳ ದೊರೆಯುವಿಕೆ, ವಿತರಣೆ ಮತ್ತು ಗುರುತಿಸುವಿಕೆಯ ಬಗ್ಗೆ ಸಾಕಷ್ಟು ಜ್ಞಾನ ನಮಗೆ ತಿಳಿದಿದ್ದರೂ ಅವು ರೂಪಗೊಳ್ಳುವ ರೀತಿ ಮತ್ತು ಅವುಗಳ ಪಾತ್ರದ ಬಗ್ಗೆ ನಾವು ತಿಳಿದಿರುವುದು ಅತ್ಯಲ್ಪ.  

ಸಸ್ಯವರ್ಗಗಳಲ್ಲಿ ಮಾತ್ರ ಕೆರೊಟಿನಾಯ್ಡುಗಳು ಸಂಯೋಜಿಸಲ್ಪಡುವುವು.  ಪ್ರಾಣಿಗಳು ಇವನ್ನು ತಮ್ಮ ಆಹಾರದ ಮೂಲಕ ಸೇವಿಸಿ ಅನಂತರ ನಾನಾ ರೀತಿಗಳಲ್ಲಿ ಶೇಖರಿಸಿಡುತ್ತವೆ.  ಇವನ್ನು ದೇಹ ಆಯ್ದೋ ಆಯದೆಯೋ ಸ್ವೀಕರಿಸಬಹುದು.  ದೇಹದ ಬೇರೆ ಬೇರೆ ಅಂಗಗಳಲ್ಲಿ ಕೆರೊಟಿನಾಯ್ಡುಗಳನ್ನು ಸಂಗ್ರಹಿಸಿ ಇಡುವ ಮೊದಲು ಅವು ಉತ್ಕರ್ಷಣೆಗೆ ಒಳಗಾಗಿ ಮಾರ್ಪಾಡುಗೊಳ್ಳಬಹುದು.  ನಿರ್ದಿಷ್ಟ ರಚನೆಗಳಿರುವ ಕೆಲವು ಕೆರೊಟಿನಾಯ್ಡುಗಳು ವಿಟಮಿನ್ ಎ ಆಗಿ ಪರಿವರ್ತನೆ ಹೊಂದಬಹುದು.  ಈ ವಿಟಮಿನ್ ರಾತ್ರಿಕುರುಡುತನವನ್ನು ತಡೆಗಟ್ಟುತ್ತದೆ.  ಸ್ತನಿಗಳಿಗೆ ಪಕ್ಷಿಗಳಿಗೆ ಮತ್ತು ಮೀನುಗಳಿಗೆ ಕೆಲವು ಕೆರೊಟಿನಾಯ್ಡುಗಳನ್ನು ವಿಟಮಿನ್ ಎ ಆಗಿ ಮಾರ್ಪಡಿಸುವ ವಿಶೇಷ ಸಾಮಥ್ರ್ಯ ಉಂಟು.

ಕೆರೊಟಿನಾಯ್ಡುಗಳನ್ನು ವಿಟಮಿನ್ ಎ ಆಗಿ ಪರಿವರ್ತಿಸುವಲ್ಲಿ ಪ್ರಾಣಿಯ ಕರುಳಿನಲ್ಲಿರುವ ಕಿಣ್ವಗಳ ಪಾತ್ರ ಅತಿಮುಖ್ಯ. ಆಡುಗಳಲ್ಲಿಯೂ ಎಮ್ಮೆಗಳಲ್ಲಿಯೂ ಇರುವ ಮೇದಸ್ಸಿನ ಅಂಗಾಂಶಗಳಲ್ಲಿ ಕೆರೊಟಿನಾಯ್ಡುಗಳಿರುವುದಿಲ್ಲ.  ಇದರ ಕಾರಣ ಆ ಪ್ರಾಣಿಗಳ ಕರುಳುಗಳಲ್ಲಿರುವ ಕಿಣ್ವ ವ್ಯವಸ್ಥೆಗಳ ದಕ್ಷತೆ-ಒಂದಿಷ್ಟು ವರ್ಣದ್ರವ್ಯವೂ ರಕ್ತಕ್ಕೆ ಸಾಗದಂತೆ ಅವು ತಡೆ ಹಾಕಿರುತ್ತವೆ.  ಆದರೆ ಮನುಷ್ಯ ಮತ್ತು ಹಸುವಿನಲ್ಲಿ ಹೀಗಲ್ಲ.  ಈ ಪರಿವರ್ತನಕಾರಿಗಳು ದುರ್ಬಲವಾಗಿರುವುದರಿಂದ ವರ್ಣದ್ರವ್ಯಗಳು ರಕ್ತವನ್ನು ಸೇರುತ್ತವೆ.  ಆದ್ದರಿಂದ ಮನುಷ್ಯ ಮತ್ತು ಹಸುವಿನ ಹಾಲು ತಿಳಿ ಹಳದಿಯಾಗಿದೆ.  ಆಡು, ಎಮ್ಮೆಯದಾದರೋ ಸ್ವಚ್ಛ ಬಿಳಿ.
ಮೊಟ್ಟೆಗಳಲ್ಲಿ ಕ್ಯಾಂತೋಫಿಲ್ಸ್ ಎಂಬ ಉತ್ಕರ್ಷಣದ ರೂಪದ ಕೆರೊಟಿನ್ ಹೇರಳವಾಗಿ ಉಂಟು.  ಸಸ್ಯಗಳಲ್ಲಿನ ದ್ಯುತಿಸಂಶ್ಲೇಷಣೆ (ಫೋಟೋಸಿಂಥೆಸಿಸ್) ಮತ್ತು ದ್ಯುತಿ ಆಕರ್ಷಣ (ಪೋಟೋಟ್ರಾಪಿಸಂ) ಕಾರ್ಯಗಳು ಬಹುಶಃ ಕೆರೊಟಿನಾಯ್ಡುಗಳಿಂದ ರೂಪಗೊಳ್ಳುವುವು.  ಅಧಿಕ ಪರಿಮಾಣದಲ್ಲಿ ವಿಟಮಿನ್ ಎ ಆಗಿ ಮಾರ್ಪಾಡಾಗುವ ಅತಿ ಮುಖ್ಯ ಕೆರೊಟಿನಾಯ್ಡು ಎನಿಸಿಕೊಂಡ ಬೀಟ ಕೆರೊಟೀನ್ ಗುಲ್‍ಮೊಹರ್ ಮರದ ಹೂ, ಮಾವು, ಪರಂಗಿ ಮತ್ತು ಇತರ ಹಣ್ಣು ಗಳಲ್ಲಿ ಯಥೇಚ್ಛವಾಗಿ ಅಡಗಿದೆ ಎಂದು ಈಚಿನ ಅಧ್ಯಯನಗಳು ತೋರಿಸಿಕೊಟ್ಟಿವೆ.

ಕರುಳಿನಲ್ಲಿ ಕೇವಲ ಅಲ್ಪ ಪರಿಮಾಣದಲ್ಲಿ ಕೆರೊಟಿನಾಯ್ಡುಗಳು ವಿಲೀನಗೊಳ್ಳುವುವು ಎಂಬ ವಿಷಯ ತಿಳಿದಿರುವುದು ಮುಖ್ಯ.  ಅದರಂತೆ ಮಕ್ಕಳಲ್ಲಿ, ಯುವಕರಲ್ಲಿ ದೃಷ್ಟಿದೋಷ ಕಾಯಿಲೆ ಬರದಂತೆ ತಡೆಯುವುದಕ್ಕೆ ಅಗತ್ಯ ಪರಿಮಾಣದಲ್ಲಿ ವಿಟಮಿನ್ ಸರಬರಾಜಾಗಲು ಗಣನೀಯವಾಗಿ ಹಣ್ಣುಗಳು, ತರಕಾರಿ, ಮೊಟ್ಟೆ, ಹಾಲು ಹಾಲಿನ ಪದಾರ್ಥಗಳು ಮತ್ತು ಮೀನಿನ ಎಣ್ಣೆ ಮುಂತಾದವನ್ನು ಸೇವಿಸುವುದು ವಿಹಿತ.                             
 (ಎಚ್.ಆರ್.ಸಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ